ವಾಷಿಂಗ್‍ಟನ್
	ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಂದು ರಾಜ್ಯ. ಇದು 1889ರಲ್ಲಿ ಅದರ 42ನೆಯ ರಾಜ್ಯವಾಗಿ ಸೇರಿತು. ಇದು ಅಮೆರಿಕದ ವಾಯವ್ಯ ಮೂಲೆಯಲ್ಲಿದೆ. ರಾಜಧಾನಿ ಒಲಂಪಿಯ. ವಿಸ್ತೀರ್ಣ 1,76,616 ಚ.ಕಿಮೀ. ಜನಸಂಖ್ಯೆ 48,87,941.

	ವಾಷಿಂಗ್‍ಟನ್ ರಾಜ್ಯ ಉತ್ತರದಲ್ಲಿ ಕೆನಡದ ರಾಜ್ಯವಾದ ಬ್ರಿಟಿಷ್ ಕೊಲಂಬಿಯ, ಪೂರ್ವದಲ್ಲಿ ಇಹಾಹೊ ರಾಜ್ಯ, ಪಶ್ಚಿಮದಲ್ಲಿ ಪೆಸಿಫಿಕ್ ಸಾಗರ ಹಾಗೂ ದಕ್ಷಿಣದಲ್ಲಿ ಓರೆಗಾನ್ ರಾಜ್ಯದಿಂದ ಸುತ್ತುವರಿದಿದೆ. ಇಲ್ಲಿಯ ನಿತ್ಯ ಹಸುರು ಅರಣ್ಯಗಳಿಂದಾಗಿ ಇದಕ್ಕೆ ನಿತ್ಯ ಹಸುರು ರಾಜ್ಯವೆಂಬ ಹೆಸರೂ ಬಂದಿದೆ. ದಟ್ಟ ಅರಣ್ಯಗಳ ನಡುವೆ ಎತ್ತರ ಪರ್ವತ ಶಿಖರಗಳು ಕಂಡುಬರುತ್ತವೆ. ಪಶ್ಚಿಮ ಸಮುದ್ರತೀರದ ಕಾಡುಗಳು ಪ್ರಪಂಚದ ಅತ್ಯಂತ ಹೆಚ್ಚು ಮಳೆ ಬೀಳುವ ಅರಣ್ಯ ಪ್ರದೇಶಗಳ ಸಾಲಿಗೆ ಸೇರಿವೆ. ಕ್ಯಾಸ್ಕಾಡ್ ಪರ್ವತಗಳ ಪೂರ್ವಕ್ಕೆ  ಮರಳುಭೂಮಿ ವ್ಯಾಪಿಸಿದೆ. ಮೌಂಟ್ ರೈನರ್ ಈ ರಾಜ್ಯದ ಅತ್ಯಂತ ಎತ್ತರದ ಶಿಖರ (4391.6 ಮೀ). ಇಲ್ಲಿ ಪರ್ವತಾಗ್ರಗಳು ವರ್ಷದ ಹೆಚ್ಚುಕಾಲ ಹಿಮದಿಂದ ಮುಚ್ಚಿರುತ್ತವೆ. ತೀರ ಪ್ರದೇಶ ಅನೇಕ ಕೊಲ್ಲಿಗಳಿಂದಲೂ ಒಳಸರಿದ ಜಲರಾಶಿಯಿಂದಲೂ ಕೂಡಿದೆ. ಇದರಿಂದಾಗಿ ಬಂದರುಗಳನ್ನು ನಿರ್ಮಿಸಲು ಅನುಕೂಲಕರವಾಗಿದೆ. ಈ ರಾಜ್ಯದ ಬಂದರುಗಳಲ್ಲಿ ಹಡಗುಗಳ ಸಂಚಾರವೂ ಅಧಿಕ. ಇಲ್ಲಿಯ ತೀರ ಪ್ರದೇಶದ ಉದ್ದ 253 ಕಿಮೀ. ಈ ರಾಜ್ಯದ ಕೆಲವೆಡೆ ಜ್ವಾಲಾಮುಖಿಗಳ ಸ್ಫೋಟವಾಗುವುದುಂಟು. ಮೌಂಟ್ ಸೆಂಟ್ ಹೆಲೆನ್ಸ್‍ನಲ್ಲಿ 1980ರಲ್ಲಿ ಇಂತಹ ಸ್ಫೋಟ ಸಂಭವಿಸಿತ್ತು.

ಬೇಸಗೆ ಕಾಲದ ಜುಲೈನಲ್ಲಿ ಉಷ್ಣಾಂಶ 190 ಸೆ. ಚಳಿಗಾಲದ ಜನವರಿಯಲ್ಲಿ 10 ಸೆ. ಇಳಿಯುತ್ತದೆ. ಸರಾಸರಿ ವಾರ್ಷಿಕ ಮಳೆ 3.97 ಸೆಮೀ. ಇಲ್ಲಿ ಅಧಿಕ ಜಲದಿಂದ ಕೂಡಿದ ಬಿರುಸಾಗಿ ಹರಿಯುವ ಹೊಳೆ, ನದಿಗಳಿವೆ. ಇವು ಜಲವಿದ್ಯುತ್ ಉತ್ಪಾದನೆಗೆ ಉಪಯುಕ್ತವಾಗಿವೆ. ವಿಸ್ತಾರವಾದ ಅರಣ್ಯಗಳು ನಾಟಾ ಮತ್ತಿತರ ಅರಣ್ಯ ಉತ್ಪನ್ನಗಳನ್ನು ಒದಗಿಸುತ್ತವೆ. ಹೇರಳವಾದ ಹುಲ್ಲುಗಾವಲುಗ ಳಿಂದಾಗಿ ಅಪಾರ ಜಾನುವಾರು ಸಂಪತ್ತಿದೆ. ಕ್ಷೀರೋತ್ಪನ್ನಗಳಿಗೆ ಈ ರಾಜ್ಯ ಪ್ರಸಿದ್ಧ. ಸೇಬು, ಗೋದಿ ಮತ್ತು ತರಕಾರಿಗಳು ಮುಖ್ಯ ಬೆಳೆಗಳು. ಕೈಗಾರಿಕೆಯಲ್ಲಿ ಈ ರಾಜ್ಯ ಗಣನೀಯ ಸಾಧನೆ ಮಾಡಿದೆ. ಹಡಗು ನಿರ್ಮಾಣ ಮತ್ತು ಹಡಗು ದುರಸ್ತು ಉದ್ಯಮಗಳೇ ಇಲ್ಲಿಯ ಆರ್ಥಿಕತೆಗೆ ಬಲತಂದಿವೆ. ವಿಮಾನ ತಯಾರಿಕೆ, ಸಾರಿಗೆ ವಾಹನಗಳ ತಯಾರಿಕೆ, ಯಂತ್ರಗಳು ಮತ್ತು ಕಾಗದ ತಯಾರಿಕೆ ಮುಖ್ಯ ಉದ್ಯಮಗಳಾಗಿವೆ. ಆಹಾರ ಸಂಸ್ಕರಣೆ ಪ್ರಮುಖ ಆರ್ಥಿಕ ಚಟುವಟಿಕೆಗಳಲ್ಲೊಂದು. ಕಲ್ಲಿದ್ದಲು, ಚಿನ್ನ, ಮೆಗ್ನೀಷಿಯಂ, ಉದ್ಯಮಗಳಿವೆ. ಮೀನುಗಾರಿಕೆ ಇಲ್ಲಿಯ ದೊಡ್ಡ ಆರ್ಥಿಕ ಚಟುವಟಿಕೆಯಾಗಿದ್ದು ವರ್ಷಕ್ಕೆ 200 ಮಿಲಿಯನ್ ಡಾಲರ್ ವಹಿವಾಟಿದೆ.

	ಇಲ್ಲಿಯ ಬಂದರುಗಳಿಂದ ಏಷ್ಯ ಮತ್ತು ಕೆನಡಗಳಿಗೆ ಅಂತಾರಾಷ್ಟ್ರೀಯ ನೌಕಾಯಾನ ಸೌಲಭ್ಯವಿದೆ. ಅಮೆರಿಕದ ಇತರ ರಾಜ್ಯಗಳ ವಿವಿಧ ಬಂದರುಗಳಿಗೆ ಇಲ್ಲಿಂದ ನೌಕಾ ಸಾರಿಗೆ ಮತ್ತು ಸರಕು ಸಾಗಣೆ ನಡೆಯುತ್ತದೆ. ಮುಖ್ಯ ಭೂಪ್ರದೇಶಕ್ಕೂ ವಿವಿಧ ದ್ವೀಪಗಳಿಗೂ ನೌಕಾ ಸಂಪರ್ಕವಿದೆ. ವಿಮಾನ ಸಾರಿಗೆಯಲ್ಲೂ ಈ ರಾಜ್ಯ ಪ್ರಾಮುಖ್ಯ ಪಡೆದಿದೆ. ಸಿಯಾಟಲ್‍ನ ಟಕೊಮ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲೊಂದು. ಸ್ಪೊಕೇನ್ ಇನ್ನೊಂದು ನಿಬಿಡ ವಿಮಾನ ಸಂಚಾರ ಹೊಂದಿರುವ ನಿಲ್ದಾಣ. ಈ ರಾಜ್ಯದಲ್ಲಿ 15 ರೈಲು ಮಾರ್ಗಗಳಿದ್ದು ರಾಜ್ಯದ 15 ನಗರ ಪಟ್ಟಣಗಳಿಗೆ ಸಂಪರ್ಕ ಒದಗಿಸಿದೆ. ಹೆದ್ದಾರಿಗಳು ಮತ್ತು ಇತರ ರಸ್ತೆ ಮಾರ್ಗಗಳ ಉದ್ದ 1,29,000 ಕಿಮೀ.

	ವಾಷಿಂಗ್‍ಟನ್ ರಾಜ್ಯ ಹೊಸದಾಗಿ ವಸಾಹತುಕರಣಗೊಂಡ ರಾಜ್ಯ. ಇಲ್ಲಿಯ ಸಾಂಸ್ಕøತಿಕ ಪರಂಪರೆ ಮತ್ತು ಹಬ್ಬ ಉತ್ಸವಗಳು ಮುಖ್ಯವಾಗಿ ವ್ಯವಸಾಯದ ಹಾಗೂ ಯುರೋಪಿಯನ್ ಪರಂಪರೆಯ ಮೂಲದವಾಗಿವೆ. ಪೂರ್ವ ವಾಷಿಂಗ್‍ಟನ್‍ನಲ್ಲಿ ಮೂಲ ನಿವಾಸಿಗಳಾದ ಇಂಡಿಯನ್ನರ ಹಬ್ಬಗಳನ್ನು ಆಚರಿಸಲಾಗುತ್ತದೆ. ಮರ ಕೊಯ್ಯುವ, ಸೇಬು, ಹೂ ಗಿಡ ಸಂಬಂಧ ಹಬ್ಬಗಳು, ಉತ್ಸವಗಳು ನಡೆಯುತ್ತವೆ. ರಾಜ್ಯದಲ್ಲಿ 25 ಮುಖ್ಯ ಕಲಾ ಗ್ಯಾಲರಿಗಳು ಮತ್ತು ವಸ್ತುಸಂಗ್ರಹಾಲಯಗಳಿವೆ. ಸಿಯಾಟಲ್‍ನಲ್ಲಿ ಇತಿಹಾಸ ಮತ್ತು ಕೈಗಾರಿಕಾ ವಸ್ತುಸಂಗ್ರಹಾಲಯವಿದೆ. ಟಕೊಮದಲ್ಲಿ ರಾಜ್ಯ ಇತಿಹಾಸ ಸಂಘದ ವಸ್ತುಸಂಗ್ರಹಾಲಯವಿದೆ. 
	(ಡಿ.ಎಸ್.ಜೆ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ